ಮಾಂಟೆಗ್ಯೂ - ಚೆಲ್ಮ್ಸ್‍ಫರ್ಡ್ ಶಿಕ್ಷಣ ಸುಧಾರಣೆ -
ಭಾರತೀಯರ ಆಡಳಿತಕ್ಕೆ ವರ್ಗಾಯಿಸಬಹುದಾದ ವಿಷಯಗಳನ್ನು ನಿರ್ಧರಿಸಲು ಆಧಾರಮಾಡಿಕೊಳ್ಳಬೇಕಾದ ತತ್ತ್ವಗಳನ್ನು ಕುರಿತು ಇಂಗ್ಲೆಂಡಿನ ರಾಜ್ಯ ಸಚಿವರಾಗಿದ್ದ ಮಾಂಟೆಗ್ಯೂ ಮತ್ತು ಭಾರತದ ಗವರ್ನರ್ ಜನರಲ್ ಆಗಿದ್ದ ಚೆಲ್ಮ್ಸ್‍ಫರ್ಡ್ ಇವರಿಬ್ಬರು 1919ರಲ್ಲಿ ಸಲ್ಲಿಸಿದ ವರದಿ. ಇದನ್ನು ಆಧರಿಸಿ ಶಿಕ್ಷಣವನ್ನು ವರ್ಗಾವಣೆ ಪಟ್ಟಿಯಲ್ಲಿ ಸೇರಿಸಲಾಯಿತು. ಇದರ ಫಲವಾಗಿ ಆಂಗ್ಲೊ ಇಂಡಿಯನ್ನರು ಮತ್ತು ಯೂರೋಪಿಯನ್ನರು ತಮ್ಮ ಹಿತಕ್ಕೆ ಧಕ್ಕೆ ಬರುವುದೆಂದು ಭಾವಿಸಿ ತಮ್ಮ ಶಿಕ್ಷಣವನ್ನು ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಇಲ್ಲವೆ ರಾಜ್ಯಸರ್ಕಾರ ಕಾಯ್ದಿರಿಸಿದ ವಿಷಯವೆಂದು ಪರಿಗಣಿಸಬೇಕು ಎಂದು ಅಹವಾಲು ಕೊಟ್ಟರು. ಆ ಬಗ್ಗೆ ಪ್ರಾಂತೀಯ ಸರ್ಕಾರಗಳಲ್ಲಿ ಒಮ್ಮತವಿರಲಿಲ್ಲ. ಉನ್ನತ ಶಿಕ್ಷಣವನ್ನು ಯೂರೋಪಿಯನ್ನರ ಇಡೀ ಶಿಕ್ಷಣವನ್ನೂ ರಕ್ಷಿತಸೂಚಿಯಲ್ಲಿ ಸೇರಿಸಬೇಕೆಂದು ಬಂಗಾಲ ಸೂಚಿಸಿತು. ಇಡೀ ಶಿಕ್ಷಣವನ್ನು ಪ್ರಾಂತ್ಯಗಳಿಗೆ ವರ್ಗಾಯಿಸಬೇಕೆಂದು ಸಂಯುಕ್ತ ಪ್ರಾಂತ್ಯ ಸೂಚಿಸಿತು. ಬಿಹಾರ್ ಮತ್ತು ಒರಿಸ್ಸ ಸರ್ಕಾರಗಳು ಪ್ರೌಢ. ಉನ್ನತ ಮತ್ತು ತಾಂತ್ರಿಕ ಶಿಕ್ಪ್ಷಣಗಳನ್ನು ವರ್ಗಾಯಿಸುವುದನ್ನು ವಿರೋಧಿಸಿದವು. ಪಂಜಾಬ್ ತನ್ನ ಅಭಿಪ್ರಾಯವನ್ನು ಕಾಯ್ದಿರಿಸಿಕೊಂಡಿತು. ಆಸ್ಸಾಮ್ ಉನ್ನತ ಶಿಕ್ಷಣದ ವರ್ಗಾವಣೆಯನ್ನು ವಿರೋಧಿಸಿತು. ಮದ್ರಾಸು ಶಿಕ್ಷಣಶಾಖೆಯ ವರ್ಗಾವಣೆಯನ್ನೇ ವಿರೋಧಿಸಿತು. ಹೀಗೆ ಪ್ರಾಂತ್ಯಗಳ ಭಿನ್ನಾಭಿಪ್ರಾಯಗಳ ಫಲವಾಗಿ ಮೇಲಿನ ಸುಧಾರಣೆ ಆಚರಣೆಗೆ ಬರುವುದು ನಿಧಾನವಾಯಿತು. ಕಡೆಗೆ ಭಾರತ ಸರ್ಕಾರದ ಬಂಗಾಲದ ಅಭಿಪ್ರಾಯಕ್ಕೆ ಬಲುಮಟ್ಟಿಗೆ ಒಪ್ಪಿಗೆ ನೀಡಿ ಕೆಲವು ರಕ್ಷಣೆಗಳೊಡನೆ ಇಡೀ ಶಿಕ್ಷಣವನ್ನು ಪ್ರಾಂತ್ಯ ಸರ್ಕಾರಗಳಿಗೆ ವರ್ಗಾಯಿಸಿತು. ಹಾಗೆ ರಕ್ಷಿತವೆಂದು ಸೂಚಿಸಿದ ಅಂಶಗಳು ಹೀಗಿವೆ:

1. ಬೆನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಮತ್ತು ಗವರ್ನರ್ ಜನರಲ್ ಇನ್-ಕೌನ್ಸಿಲ್ ಅಖಿಲ ಭಾರತೀಯವೆಂದು ಸೂಚಿಸುವ ಇತರ ವಿಶ್ವವಿದ್ಯಾಲಯಗಳನ್ನು ಭಾರತ ಸರ್ಕಾರವೇ ನೋಡಿಕೊಳ್ಳುವುದು.

2. ಭಾರತದ ಅರಸುಕುಮಾರರ ಕಾಲೇಜುಗಳು. ಸೈನಿಕರಿಗೂ ಸರ್ಕಾರ ಅಧಿಕಾರಗಳ ಮಕ್ಕಳಿಗೂ ಏರ್ಪಡಿಸಿರುವ ಶಿಕ್ಷಣ ಸಂಸ್ಥೆಗಳು ಸರ್ಕಾರದ ನೇರ ನಿಯಂತ್ರಣದಲ್ಲಿರಬೇಕಾದ್ದರಿಂದ ಅವು ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತವೆ.

3. ಆಂಗ್ಲೊ ಇಂಡಿಯನ್ನರ ಮತ್ತು ಯೂರೋಪಿಯನ್ನರ ಶಿಕ್ಷಣಕ್ಕಿರುವ ಸಂಸ್ಥೆಗಳು ಪ್ರಾಂತೀಯ ಆಡಳಿತಕ್ಕೆ ಸೇರಿದರೂ ರಕ್ಷಿತ ವಿಷಯಗಳೆಂದು ಭಾವಿಸಲಾಗುತ್ತದೆ.

4. ಕಲ್ಕತ್ತ ವಿಶ್ವವಿದ್ಯಾಲಯಕ್ಕೂ ಬಂಗಾಲದ ಪ್ರೌಢಶಿಕ್ಷಣದ ಪುನವ್ರ್ಯವಸ್ಥೆಗೂ ಸೇರಿದ ವಿಷಯಗಳ ಬಗ್ಗೆ (ಪುನವ್ರ್ಯವಸ್ಥೆಯ ಅನಂತರ ಐದು ವರ್ಷಗಳ ಪರ್ಯಂತ ಮಾತ್ರ) ಶಾಸನ ಮಾಡುವ ಅಧಿಕಾರ ಕೇಂದ್ರ ಶಾಸನಸಭೆಗೇ ಸೇರಿರುತ್ತದೆ.

ಮೇಲಿನ ವಿವರಣೆಯಿಂದ ಶಿಕ್ಷಣ ಭಾಗಶಃ ಅಖಿಲ ಭಾರತವೂ ಭಾಗಶಃ ರಕ್ಷಿತವೂ ಭಾಗಶಃ ಮಿತಿಗಳೊಡನೆ ವರ್ಗಾಯಿಸಿದ್ದೂ ಭಾಗಶಃ ಮಿತಿಯಿಲ್ಲದೆ ವರ್ಗಾಯಿಸಿದ್ದೂ ಆಗಿ ಪರಿಣಮಿಸಿತು. ಹೀಗಾಗಲು ಭಿನ್ನರೀತಿಯ ಅಭಿಪ್ರಾಯಗಳಿಗೆ ಮನ್ನಣೆ ನೀಡಲು ಭಾರತ ಸರ್ಕಾರ ನಡೆಸಿದ ಯತ್ನವೇ ಕಾರಣ. ಮಾಂಟೆಗ್ಯೂ-ಚೆಲ್ಮ್ಸ್‍ಫರ್ಡ್ ವರದಿಯನ್ನು ಆಧಾರಮಾಡಿಕೊಂಡು ಭಾರತ ಸರ್ಕಾರ ರೂಪಿಸಿದ ಸ್ವರೂಪದಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ 1921ರಲ್ಲಿ ಅದಕ್ಕೆ ಅನುಮೋದನೆ ನೀಡಿದ ಮೇಲೆ ಇತರ ಕೆಲವು ಬಾಬುಗಳಂತೆ ಶಿಕ್ಷಣವೂ ಪ್ರಾಂತೀಯ ಸರ್ಕಾರಗಳ ಆಡಳಿತಕ್ಕೆ ಬಂತು. ಈ ದ್ವಿತಂತ್ರ ಆಡಳಿತ ಆರಂಭವಾದೊಡನೆ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹಣಕೊಡುವುದನ್ನು ನಿಲ್ಲಿಸಿತು. ಪ್ರಾಂತೀಯ ಸರ್ಕಾರಕ್ಕೆ ಆದಾಯ ಮೂಲ ಅಷ್ಟಾಗಿ ಇರಲಿಲ್ಲ. ಅಲ್ಲದೆ ಶಿಕ್ಷಣದ ಕೆಲವು ಅಂಶಗಳ ಬಗ್ಗೆ ಪ್ರಾಂತೀಯ ಸರ್ಕಾರ ಕೈಹಾಕುವ ಹಾಗಿರಲಿಲ್ಲ. ಜೊತೆಗೆ ಶಿಕ್ಷಣಕ್ಕೆ ಉನ್ನತ ಸ್ಥಾನದಲ್ಲಿದ್ದ ಐ. ಸಿ. ಎಸ್. ಆಧಿಕಾರಿಗಳು ಪ್ರಾಂತೀಯ ಶಿಕ್ಷಣಸಚಿವರೊಡನೆ ಸಹಕರಿಸುತ್ತಿರಲಿಲ್ಲ. ಅವರು ಲಂಡನ್ನಿನ ಭಾರತದ ರಾಜ್ಯ ಸಚಿವರಿಗೆ ನೇರವಾಗಿ ಹೊಣೆಗಾರರಾಗಿದ್ದರು. ಇಷ್ಟೆಲ್ಲ ಅವ್ಯವಸ್ಥೆಗೆ ಸಿಕ್ಕಿದ ಭಾರತೀಯರ ಆಡಳಿತಕ್ಕೆ ಬಂದರೂ ಪ್ರಗತಿ ಸಾಧಿಸದಾದುದು ಸ್ವಾಭಾವಿಕ.
	(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ